ಇಂಜಿನಿಯರಿಂಗ್ ಕಾಲೇಜು ಪ್ರವೇಶ
ಇಂಜಿನಿಯರಿಂಗ್ ಕಾಲೇಜು ಪ್ರವೇಶ
2004ನೆ ವರ್ಷದಲ್ಲಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪಿ ಯು ಕಾಲೇಜನಲ್ಲಿ ಓದಿದ್ದ ನಾನು ಪರೀಕ್ಷೆಯಲ್ಲಿ ಶೇಕಡಾ 81% ಅಂಕ ಪಡೆದು ಪಾಸಾಗಿದ್ದೆ. ಸಿಇಟಿ ಪರೀಕ್ಷೆಯಲ್ಲಿ 7007 ರ‍್ಯಾಂಕ್ ಪಡೆದಿದ್ದೆ. ಡಾಕ್ಟರ್ ಓದುವ ಅವಕಾಶದಿಂದ ವಂಚಿತನಾಗಿ ಉಳಿದ ವೃತ್ತಿಪರ ಕೋರ್ಸಗಳಾದ ಬಿಎಸ್ಸಿ ಅಗ್ರಿ, ವೆಟರ್ನರಿ ಪ್ರವೇಶಕ್ಕೆ ಪ್ರಯತ್ನ ಮಾಡಿ ವಿಫಲನಾಗಿ ಇಂಜಿನಿಯರಿಂಗ್ ಸೇರುವುದು ಅನಿವಾರ್ಯವಾಗಿತ್ತು.
ಇನ್ನು ಇಂಜಿನಿಯರಿಂಗ್ ಕಾಲೇಜುಗಳ ಸಿಇಟಿ ಕೌನ್ಸೆಲಿಂಗ್ ಪ್ರಾರಂಭವಾಗಿರಲಿಲ್ಲ ಯಾವ ಇಂಜಿನಿಯರಿಂಗ್ ಕಾಲೇಜು ಸೇರುವುದು ಎಂದು ಗೊಂದಲದಲ್ಲಿದ್ದೆ. ಕೆಲ ನನ್ನ ಸ್ನೇಹಿತರ ಸ್ಥಿತಿವಂತ ಪೋಷಕರು ಮ್ಯಾನೇಜ್ಮೆಂಟ್ ಕೋಟಾದಡಿ ಬೆಂಗಳೂರಿನ ಒಳ್ಳೆಯ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಪಡೆದಿದ್ದರು. ನಾನು ಸಹ ನನ್ನ ತಂದೆಯ ಬಳಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರಯತ್ನ ಮಾಡಿದರೆ ನನಗೂ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಸಿಗುತ್ತೆ ಅಂತ ಹಠ ಮಾಡಿದ್ದೆ. ಮಾಧ್ಯಮ ವರ್ಗದ ಕುಟುಂಬವಾದರೂ ತಂದೆ ತಾಯಿ ಇಬ್ಬರು ನೌಕರಿದಾರರೇ ಆದರೂ ಮನೆಯಲ್ಲಿ ಸ್ವಲ್ಪ ಹಣಕಾಸಿನ ತೊಂದರೆ ಇದ್ದ ಕಾರಣ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆಯುವದು ವಿಫಲವಾಯಿತು.
ಆದರೂ ಛಲ ಬಿಡದ ತ್ರಿವಿಕ್ರಮನಂತೆ ಚಳ್ಳಕೆರೆಯಿಂದ ಬೆಂಗಳೂರು ಬಸ್ಸು ಏರಿ ರಾತ್ರೋರಾತ್ರಿ ಬೆಂಗಳೂರು ಸೇರಿದ್ದೇ. ಬೆಂಗಳೂರಿನ ವಿಶ್ವವಿದ್ಯಾಲಯದ ಹತ್ತಿರವಿದ್ದ ಸರ್ಕಾರ ಕಲಾ ಮತ್ತು ವಿಜ್ಞಾನ ಕಾಲೇಜು ಬಳಿ ನಡೆತಿದ್ದ ಯಡಿಯೂರಪ್ಪನವರ ಅಹೋರಾತ್ರಿ ಬಿಜೆಪಿ ಪಕ್ಷದ ಹೋರಾಟದ ವೇದಿಕೆಯಲ್ಲಿ ಪಾಲ್ಗೊಂಡು ಪರಿಚಯವಿಲ್ಲದ ಮಾಜಿ ಮಂತ್ರಿಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಸುರೇಶ ಕುಮಾರ್ ಬಳಿ ನನಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜುನಲ್ಲಿ ಸೀಟ್ ಕೊಡಿಸಲು ಮನವಿ ಮಾಡಿದ್ದೆ. ಕಟ್ಟಾ ಸುಬ್ರಮಣ್ಯ ನಾಯ್ಡು ಕೊಡಿಸೋಣ ಅಂತ ಭರವಸೆ ನೀಡಿದ್ದರು ಆದ್ರೆ ಸುರೇಶ ಕುಮಾರ್ ಮಾತ್ರ ಸಿಇಟಿ ಕೌನ್ಸೆಲಿಂಗ್ ನಲ್ಲಿ ಸರ್ಕಾರದ ಕೋಟದಡಿಯಲ್ಲೇ ಸೀಟ್ ಪಡೆಯಲು ಹೇಳಿದರು. ಅಲ್ಲೇ ವೇದಿಕೆಯಲ್ಲಿ ರಾತ್ರಿ ಮಲಗಿ ಬೆಳಗ್ಗೆ ಸಿವಿಲ್ ಕೋರ್ಟ್ ಮುಂದೆ ಯಡಿಯೂರಪ್ಪನವರು ವಾಕಿಂಗ್ ಮಾಡುತ್ತಿದ್ದರು ಹೋಗಿ ಪರಿಚಯ ಮಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲದಂತೆ ಚಳ್ಳಕೆರೆ ಬಸ್ಸು ಹತ್ತಿದ್ದೆ.
ಸಿಇಟಿ ಕೌನ್ಸೆಲಿಂಗ್ ಘೋಷಣೆ ಮಾಡಿದರು, 52000 ರು ಡಿಡಿ ಯೊಂದಿಗೆ ನಾನು ಮತ್ತು ನನ್ನ ತಂದೆ ಚಳ್ಳಕೆರೆಯಿಂದ ಬೆಂಗಳೂರಿಗೆ ರಾತ್ರಿ ಬಸ್ಸು ಹತ್ತಿದೆವು, ನನ್ನ ಅಣ್ಣ ಬೀಳ್ಕೊಡಲು ಬಂದಿದ್ದ. ಬೆಂಗಳೂರಿಗೆ ಬೆಳಗಿನ ಜಾವ ಬಂದವರೇ ಆನಂದ್ ರಾವ್ ಸರ್ಕಲ್ ಬಳಿಯ ಸಂಗೀತ ಲಾಡ್ಜ್ ನಲ್ಲಿ ಫ್ರೆಶ್ ಆಗಿ ಮಲ್ಲೇಶವರದ ಸಿಇಟಿ ಕಚೇರಿಗೆ ಬಂದೆವು ಕೌನ್ಸೆಲಿಂಗ್ ನಲ್ಲಿ ಬೆಂಗಳೂರಿನ ಹೋಪ್ ಫಾರ್ಮ್ ಬಳಿಯಿರುವ ಎಂವಿಜೆ ಇಂಜಿನಿಯರಿಂಗ್ ಕಾಲೇಜನಲ್ಲಿ ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿಕೊಂಡಿದ್ದೆ. ನನ್ನ ತಂದೆಗೆ ಭಾವುಕ ಕ್ಷಣ ಅದೇ ಹುಮ್ಮಸ್ಸಿನಲ್ಲಿ ನಾವಿಬ್ಬರು ಮಲ್ಲೇಶವರದಿಂದ ಮೆಜೆಸ್ಟಿಕ್ ಗೆ ಬಂದು ಮೆಜೆಸ್ಟಿಕ್ ನಿಂದ ಟಿನ್ ಫ್ಯಾಕ್ಟರಿಗೆ ಬಿಎಂಟಿಸಿ ಬಸ್ನಲ್ಲಿ ಬಂದು ಅಲ್ಲಿಂದ ಪ್ರೈವೇಟ್ ಬಸ್ನಲ್ಲಿ ಹೋಪ್ ಫಾರಂ ನ ಎಂವಿಜೆ ಕಾಲೇಜುಗೆ ಬಂದೆವು ಜಾಗ ಹೊಸದಾದರೂ ಅಪಘಾತದಲ್ಲಿ ಒಂದು ಕಾಲು ಪೆಟ್ಟುಮಾಡಿಕೊಂಡು ಸ್ಟಿಕ್ ಬಳಸುತ್ತಿದ್ದರು ಯಾವದೇ ನೋವು ತೋರಸದೆ ನಮ್ಮಪ್ಪ ನನ್ನ ಜೊತೆ ಹೆಜ್ಜೆ ಹಾಕುತಿದ್ದರು. ಕಾಲೇಜುಗೆ ಹೋಗಿ ಶುಲ್ಕ ವಿಚಾರಿಸಿದೆವು, ಹಾಸ್ಟೆಲ್ ನೊಡೆದುವು, ಹಾಸ್ಟೆಲ್ ಶುಲ್ಕ ವಿಚಾರಿಸಿದೆವು ವರ್ಷಕ್ಕೆ 50000 ರೂ ಅಂದರು ನಾವಿಬ್ಬರು ಕಾಲೇಜು ಶುಲ್ಕ 50000 ರೂ ಮತ್ತು ಹಾಸ್ಟೆಲ್ ಶುಲ್ಕ 50000 ರೂ ಸೇರಿ ವರ್ಷಕ್ಕೆ ಒಂದು ಲಕ್ಷ ನಾಲ್ಕು ವರ್ಷಕ್ಕೆ ನಾಲ್ಕು ಲಕ್ಷ ಅಂತ ಅಂದಾಜು ಮಾಡಿ ನನಗೆ ಇದು ದುಬಾರಿ ಅನಿಸದರು ನನ್ನ ತಂದೆ ಯೋಚನೆ ಮಾಡಬೇಡ ಶಿಕ್ಷಣ ಸಾಲ ಸಿಗುತ್ತೆ ತೊಂದರೆ ಇಲ್ಲ ನೀನು ಓದು ಅಂತ ಪ್ರೋತ್ಸಾಹಿಸಿದ್ರು.
ದುಬಾರಿ ಸಿ ಇ ಟಿ ಶುಲ್ಕದಿಂದ ನೊಂದು ಹರಿಹರದಲ್ಲಿ ವಿದ್ಯಾರ್ಥಿನಿ ಮಮತಾ ಆತ್ಮಹತ್ಯ ಮಾಡಿಕೊಂಡಿದ್ದರು. ಎಬಿವಿಪಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿತ್ತು. ನಾನು ಕೆಲವರನ್ನು ಸಂಪರ್ಕಿಸಿ ಚಳ್ಳಕೆರೆಯಲ್ಲಿ ಹೋರಾಟದ ನೇತೃತ್ವಹಿಸಿ ಎಬಿವಿಪಿ ಕರೆ ನೀಡಿದ್ದ ಹೋರಾಟವನ್ನು ಯಶಸ್ವಿಗೊಳಿಸಿದ್ದೆ. ಅದರ ಫಲಶ್ರುತಿಯಾಗಿ ಸರ್ಕಾರ ಶುಲ್ಕವನ್ನು ಕಡಿಮೆ ಮಾಡಿ ಮೊತ್ತಂದು ಸುತ್ತಿನ ಸಿಇಟಿ ಕೌನ್ಸೆಲಿಂಗ್ ಗೆ ಕರೆದಿತ್ತು.
ನಮ್ಮ ಮನೆಯ ಓನರ್ ಮಗ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜನಲ್ಲಿ ಎಲೆಕ್ಟ್ರಾನಿಕ್ಸ್ ಓದಿದ್ದರು ಹಾಗೂ ನನ್ನ ಅಣ್ಣನ ಸ್ನೇಹಿತ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜನಲ್ಲಿ ಮೆಕ್ಯಾನಿಕಲ್ ಓದಿದ್ದರು. ಇವರಿಬ್ಬರನ್ನು ಸಲಹೆಗಾಗಿ ಭೇಟಿಯಾದ ನಮ್ಮ ಮಾವ, ಅಮ್ಮ, ಅಣ್ಣ ನನಗೆ ದಾವಣಗೆರೆ ಬಿಡಿಟಿ ಇಂಜಿನಿಯರಿಂಗ್ ನಲ್ಲಿ ಸೀಟ್ ಸಿಕ್ಕರೆ ಸೇರಿಸಲು ತೀರ್ಮಾನಿಸದರು. ಎಲೆಕ್ಟ್ರಾನಿಕ್ಸ್ ಬದಲು ಕಂಪ್ಯೂಟರ್ ಸೈನ್ಸ್ ತೆಗೆದುಕೊಳ್ಳಲು ಹೇಳಿದ್ದರು. ಈ ಬಾರಿ ಕಾಲಿನ ಸಮಸ್ಯೆಯಿಂದ ನನ್ನ ತಂದೆ ಬದಲು ನನ್ನ ಅಣ್ಣ ಬೆಂಗಳೂರಿಗೆ ನನ್ನ ಜೊತೆ ಬಂದಿದ್ದ. ಕೌನ್ಸೆಲಿಂಗ್ ನಲ್ಲಿ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ನಲ್ಲಿ ನಮ್ಮಂತೆಯೇ ಕಂಪ್ಯೂಟರ್ ಸೈನ್ಸ್ ನಲ್ಲಿ ಜನರಲ್ ಕೋಟದಡಿಯಲ್ಲಿ ಸೀಟ್ ಖಾಲಿ ಇತ್ತು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆದುದರಿಂದ ಶುಲ್ಕ ವರ್ಷಕ್ಕೆ ಹತ್ತು ಸಾವಿರ. ನನ್ನ ಅಣ್ಣನಿಗೆ ದುಡ್ಡು ಕಡಿಮೆ ಅನ್ನೋ ಖುಷಿ, ಅದೇ ಖುಷಿಯಲ್ಲಿ ಬೆಂಗಳೂರಿನ ಮೆಜಸ್ಟಿಕ್ ನಲ್ಲಿ ಎರಡು ಜೊತೆ ಬಟ್ಟೆ ತೆಗೆದುಕೊಂಡು ಚಳ್ಳಕೆರೆಗೆ ಬಸ್ ಹತ್ತಿದಿವು.
ಒಂದು ವಾರದ ನಂತರ ನಾನು, ನಮ್ಮಪ್ಪ, ನಮ್ಮಮ್ಮ ಮಾರುತಿ ವ್ಯಾನ್ ನಲ್ಲಿ ಚಳ್ಳಕೆರೆಯಿಂದ ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜುಗೆ ಅಡ್ಮಿಶನ್ ಗೆ ಬಂದೆವು. ಜೀವನದ ಸುಮಧುರ ನೆನಪುಗಳಿಗೆ ಅಡಿಗಲ್ಲು ನೆಟ್ಟಂತ ದಿನ. ಅವತ್ತೇ ಮೊದಲು ಮತ್ತು ಕೊನೆ ನನ್ನ ತಂದೆ ತಾಯಿ ಕಾಲೇಜು ಮುಗಿಯವರಿಗೂ ಬರಲಿಲ್ಲ.
ಮುಂದಿನ ಅನುಭವ ಮತ್ತೆ ಬರೆಯುವ.
ಮುಂದಿನ ಅನುಭವ ಮತ್ತೆ ಬರೆಯುವ.
Comments
Post a Comment